ಎಡ್ವರ್ಡ್ ಸಪೀರ್:-
1884-1939. ಅಮೆರಿಕದ ಪ್ರಸಿದ್ಧ ಭಾಷಾ ವಿಜ್ಞಾನಿ ಮತ್ತು ಮಾನವಶಾಸ್ತ್ರಜ್ಞ. ಪಶ್ಚಿಮ ಜರ್ಮನಿಯ ಲ್ಯುಯನ್ ಬರ್ಗ್ ಪಟ್ಟಣದ ಪೊಮೇರೇನಿಯ ಎಂಬಲ್ಲಿ 1884 ಜನವರಿ 26ರಂದು ಜನಿಸಿದ. ತಾಯಿತಂದೆಯೊಡನೆ 1889ರಲ್ಲಿ ಅಮೆರಿಕಕ್ಕೆ ಬಂದು ಪ್ರಾಥಮಿಕ ಶಿಕ್ಷಣ ಪಡೆದ. ತರುವಾಯ ಕೊಲಂಬಿಯ ವಿಶ್ವವಿದ್ಯಾಲಯದಲ್ಲಿ ಓದಿ ಪದವಿ ಗಳಿಸಿದ (1904). ಪದವಿ ತರಗತಿಗಳಲ್ಲಿ ಅಧ್ಯಯನ ಮಾಡಿದ ವಿಷಯಗಳು ಇಂಡೊ ಯುರೋಪಿಯನ್ ಮತ್ತು ಜಮ್ರ್ಯಾನಿಕ್ ಭಾಷಾಶಾಸ್ತ್ರ. ಫ್ರಾನ್ಜ್ ಬೋವಾಸನ (1858-1942) ಮಾನವಶಾಸ್ತ್ರ ಮತ್ತು ಭಾಷಾಶಾಸ್ತ್ರ ಉಪನ್ಯಾಸಗಳಿಂದ ಪ್ರಭಾವಿತನಾಗಿ ಅಮೆರಿಕನ್ ಇಂಡಿಯನ್ ಭಾಷೆ ಮತ್ತು ಸಂಸ್ಕøತಿಗಳನ್ನು ಕುರಿತು ವಿಶೇಷ ಅಧ್ಯಯನ ನಡೆಸಿ ಪಿಎಚ್.ಡಿ. ಪದವಿ ಗಳಿಸಿದ (1909). ಒಟ್ಟಾವದ ಕೆನೆಡಿಯನ್ ನ್ಯಾಷನಲ್ ಮ್ಯೂಸಿಯಮ್ ಸಂಸ್ಥೆ ಮಾನವಶಾಸ್ತ್ರ ವಿಭಾಗ ಆರಂಭಿಸಿದಾಗ ವಿಭಾಗ ಮುಖ್ಯಸ್ಥನಾಗಿ ಸೇವೆ ಸಲ್ಲಿಸಿದ (1910-25). ಈ ಅವಧಿಯಲ್ಲಿ ಮಾನವಕುಲಶಾಸ್ತ್ರ ಮತ್ತು ಮಾನವ ಭಾಷಾವಿಜ್ಞಾನದ ಕ್ಷೇತ್ರಗಳೆಡೆಗೆ ಹೆಚ್ಚಿನ ಗಮನ ಹರಿಸಿದ. ಇವನ ಕ್ಷೇತ್ರಕಾರ್ಯ ವರದಿಗಳಿಂದ ಅನೇಕ ಹೊಸ ವಿಚಾರಗಳು ತಿಳಿದುಬಂದುವು. ಹಲವು ವಿಶ್ವವಿದ್ಯಾಲಯಗಳು ಇವನಿಗೆ ಹುದ್ದೆ ಕೊಡಲು ಮುಂದಾದವು. 1925ರಲ್ಲಿ ಅಮೆರಿಕಕ್ಕೆ ಬಂದು ಶಿಕಾಗೊ ವಿಶ್ವವಿದ್ಯಾಲಯದಲ್ಲಿಯ ಬೋಧನಾ ವಿಭಾಗಕ್ಕೆ ಸೇರಿ, 1927ರಲ್ಲಿ ಪ್ರಾಧ್ಯಾಪಕನಾದ. ಸಂಶೋಧನೆ ಮುಂದುವರಿಸಿ ಅಮೆರಿಕ, ಕೆನಡ, ಮೆಕ್ಸಿಕೊ ಮತ್ತು ಮಧ್ಯ ಅಮೆರಿಕದ ಹಲವಾರು ಇಂಡಿಯನ್ ಭಾಷೆಗಳನ್ನು ಆರು ಪ್ರಮುಖ ವರ್ಗಗಳಲ್ಲಿ ವರ್ಗೀಕರಿಸ ಬಹುದೆಂದು ಸಲಹೆ ಮಾಡಿದ (1929). 1931ರಲ್ಲಿ ನ್ಯೂ ಹೆವನ್ ಎಂಬಲ್ಲಿಯ ಮೇಲ್ ವಿಶ್ವವಿದ್ಯಾಲಯದಲ್ಲಿ ಮಾನವಶಾಸ್ತ್ರ ಮತ್ತು ಸಾಮಾನ್ಯ ಭಾಷಾವಿಜ್ಞಾನದ ಪ್ರಾಧ್ಯಾಪಕನಾಗಿ 1939ರ ತನಕ ಅದೇ ಹುದ್ದೆಯಲ್ಲಿದ್ದ. 

	ಈತನದು ಅನ್ವೇಷಣಶೀಲ ಚಿಂತನೆ. ಬಹುಮುಖ ಪ್ರತಿಭೆ. ಇದಕ್ಕೆ ಸಾಕ್ಷಿ ಈತ ನಡೆಸಿದ ಉತ್ತರ ಅಮೆರಿಕನ್ ಇಂಡಿಯನ್ ಭಾಷೆಗಳ ಭಾಷಾ ವೈಜ್ಞಾನಿಕ ಅಧ್ಯಯನ. ತಕೆಲ್‍ಮನ್, ವೈಶ್ರಮ್, ಯಾನ, ತ್ಲಿನ್‍ಜಿತ್, ನೂತ್ಕ, ಸಾರ್ಸಿ, ಕಚಿನ್, ಇಂಗಲಿಕ್, ಹ್ಯೂಪಾ, ನವಾಹೋ, ಪಯುತೆ ಭಾಷಾಕ್ಷೇತ್ರಗಳು ಈತನ ಅಧ್ಯಯನ ವ್ಯಾಪ್ತಿಗೆ ಒಳಪಟ್ಟಿದ್ದುವು. ಉತೊ-ಅeóïಟೆಕನ್, ಅಥಪಸ್ಕನ್, ಹೋಕನ್ ಭಾಷಾವರ್ಗಗಳು ಮತ್ತು ಕ್ಯಾಲಿಫೋರ್ನಿಯದ ಆಲ್ಗೊನ್‍ಕಿಯನ್ ಭಾಷೆಗಳ ತೌಲನಿಕ ಅಧ್ಯಯನ ಮಾಡಿದ. ಇಷ್ಟಕ್ಕೇ ತೃಪ್ತನಾಗದೆ ತೊಕೇರಿಯನ್ ಭಾಷೆಯನ್ನೂ ಜಬೋ ಭಾಷೆಯನ್ನೂ ಕುರಿತು ಕ್ಷೇತ್ರಕಾರ್ಯ ನಡೆಸಿ ಅನೇಕ ವ್ಯಾಕರಣಾಂಶಗಳನ್ನು ಹೊರಗೆಡಹಿದ. 

	ಈತ ಭಾಷಾವಿಜ್ಞಾನವನ್ನು ಸಮಾಜವಿಜ್ಞಾನದ ಒಂದು ವರ್ಗವೆಂದೇ ಭಾವಿಸಿದ್ದ. ಪ್ರತಿಯೊಂದು ಭಾಷೆಯೂ ಸಂಸ್ಕøತಿಯ ಒಂದು ಅಂಗ ಎಂಬುದು ಇವನ ನಿಲುವು. ಇವನ ಉಪನ್ಯಾಸಗಳಲ್ಲೂ ಬರೆಹಗಳಲ್ಲೂ ಈ ವಿಚಾರಧಾರೆ ಹರಿದಿದೆ. ಆದಿವಾಸಿ ಬುಡಕಟ್ಟು ಜನರ ಭಾಷೆಗಳ ವಿವರ ಸಂಗ್ರಹಿಸುವಾಗ ಆ ಜನರ ಸಂಸ್ಕøತಿ ಕಡೆಗೂ ವಿಶೇಷ ಗಮನ ಹರಿಸಿ, ಭಾಷೆ ಮತ್ತು ಸಂಸ್ಕøತಿಗೆ ಸಂಬಂಧಿಸಿದ ಪೂರಕ ಅಂಶಗಳನ್ನು ಟಿಪ್ಪಣಿ ಮಾಡಿಕೊಳ್ಳುತ್ತಿದ್ದ. ಆದ್ದರಿಂದಲೇ ಭಾಷಾವಿಜ್ಞಾನಕ್ಕೂ ಸಮಾಜ ಸಂಸ್ಕøತಿಗೂ ಇರುವ ನಿಕಟ ಸಂಬಂಧವನ್ನು ಇವನ ಎಲ್ಲ ಬರೆಹಗಳಲ್ಲೂ ಕಾಣಬಹುದು. ಇವನ ಬರೆಹ ಬಲು ಕಡಿಮೆ. ಭಾಷೆಯಿಂದ ಹಿಡಿದು ಸಂಗೀತದವರೆಗೆ ಅನೇಕ ವಿಷಯಗಳ ಬಗ್ಗೆ ಬಿಡಿ ಬಿಡಿ ಲೇಖನಗಳನ್ನು ಬರೆದಿದ್ದಾನೆ. ಅವುಗಳ ಪೈಕಿ ಮುಖ್ಯವಾದುವು:ಸಮ್ ಆ್ಯಸ್ಪೆಕ್ಟ್ಸ್ ಆಫ್ ನೂತ್ಕ ಲಾಂಗ್ವೇಜ್ ಅಂಡ್ ಕಲ್ಚರ್ (1911), ಮ್ಯೂಸಿಕಲ್ ಫೌಂಡೇಷನ್ಸ್ ಆಫ್ ವರ್ಸ್ (1921), ಸೌಂಡ್ ಪ್ಯಾಟನ್ರ್ಸ್ ಇನ್ ಲಾಂಗ್ವೇಜ್ (1925), ದಿ ಸ್ಟೇಟಸ್ ಆಫ್ ಲಿಂಗ್ವಿಸ್ಟಿಕ್ಸ್ ಆ್ಯಸ್ ಎ ಸೈನ್ಸ್ (1929) ಮತ್ತು ಎ ಸ್ಟಡಿ ಆಫ್ ಫೊನೆಟಿಕ್ ಸಿಂಬಾಲಿಸಮ್ (1929). ಡೇವಿಡ್ ಮಾಂಡೆಲ್‍ಬಮ್ ಎಂಬಾತ ಸಪೀರನ ಲೇಖನಗಳನ್ನು ಸಂಗ್ರಹಿಸಿ ಪುಸ್ತಕರೂಪದಲ್ಲಿ ಹೊರತಂದಿದ್ದಾನೆ (1949). 

	ಭಾಷಾವಿಜ್ಞಾನ ಕ್ಷೇತ್ರದಲ್ಲಿ ಸಪೀರನ ಹೆಸರನ್ನು ಶಾಶ್ವತವಾಗಿರಿಸಿರುವ ಪುಸ್ತಕ `ಲಾಂಗ್ವೇಜ್ : ಆ್ಯನ್ ಇಂಟ್ರೊಡಕ್ಷನ್ ಟು ದಿ ಸ್ಟಡಿ ಆಫ್ ಸ್ಪೀಚ್ (1921). ಇದು ಪ್ರಪಂಚದ ಕೆಲವೇ ಉತ್ತಮ ಹಾಗೂ ಜನಪ್ರಿಯ ಭಾಷಾವಿಜ್ಞಾನದ ಪುಸ್ತಕಗಳ ಸಾಲಿನಲ್ಲಿ ಸೇರಿದೆ. ಇದರಲ್ಲಿ ಸಮಾಜ, ಸಂಸ್ಕøತಿ, ಮನೋವಿಜ್ಞಾನ, ಜನಾಂಗ ಇವುಗಳೊಡನೆ ಭಾಷೆ ಪಡೆದಿರುವ ಸಂಬಂಧ ಕುರಿತ ಇವನ ಚಿಂತನೆ ಗಮನಾರ್ಹವಾದುದು. ಈತ ದೊಡ್ಡ ಮಾನವವಾತಾದಿಯಾಗಿದ್ದ. ಮಾನವ ಸಮೂಹದಲ್ಲಿ ವರ್ಣದ್ವೇಷವನ್ನು ಉಗ್ರವಾಗಿ ಖಂಡಿಸುತ್ತಿದ್ದ. ಸಪೀರನ ಪ್ರಭಾವ ಮುಖ್ಯವಾಗಿ ಇವನ ಉಪನ್ಯಾಸಗಳಿಂದ ಆಗಿದೆ. ವಿವರಣಾತ್ಮಕ ಭಾಷಾವಿಜ್ಞಾನ ವ್ಯವಸ್ಥಿತ ರೀತಿಯಲ್ಲಿ ಅಧ್ಯಯನ ವಿಷಯವಾಗಲು ಹೆಚ್ಚು ಶ್ರಮಿಸಿದ. ಈ ಶತಮಾನದ ಅಮೆರಿಕದ ಪ್ರಸಿದ್ಧ ಭಾಷಾವಿಜ್ಞಾನಿಗಳ ಪೈಕಿ ಹೆಚ್ಚು ಮಂದಿ ಇವನ ವಿದ್ಯಾರ್ಥಿಗಳೇ ಆಗಿದ್ದವರು. ಇವನ ಕ್ಷೇತ್ರಕಾರ್ಯದಿಂದ ಅಮೆರಿಕನ್ ಭಾಷಾವಿಜ್ಞಾನ ಪಂಥ ಬಹುಮುಖವಾಗಿ ಬೆಳೆಯಿತು. ಇವನ ಸಾಧನೆಗೆ ಸಂದ ಗೌರವಗಳು ಪ್ರಶಸ್ತಿಗಳು ಅನೇಕ. ಕೊಲಂಬಿಯ ವಿಶ್ವವಿದ್ಯಾಲ ಯದ ಡಿ.ಎಸ್‍ಸಿ. ಪದವಿ (1929), ಮಾನವ ಶಾಸ್ತ್ರ ಸಂಸ್ಥೆಯ ಅಧ್ಯಕ್ಷತೆ (1933), ಸಿಗ್ಮ ಘಿI ಮತ್ತು ರಾಷ್ಟ್ರೀಯ ವಿಜ್ಞಾನ ಸಂಸ್ಥೆಯ ಸದಸ್ಯತ್ವ. ಈತ 1939 ಫೆಬ್ರವರಿ 4 ರಂದು ನಿಧನನಾದ.	
							
(ಎಮ್.ಬಿ.ಇ.; ಸಿ.ಎಸ್.ಆರ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ